ಉಪಾಧ್ಯೆ, ಎ. ಎನ್.: 1906-75. ಸಂಸ್ಕೃತ, ಪ್ರಾಕೃತ, ಕನ್ನಡ, ಮರಾಠಿ, ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಅಂತಾರಾಷ್ಟ್ರೀಯ ಖ್ಯಾತ ವಿದ್ವಾಂಸರು. ಇವರ ಪೂರ್ಣ ಹೆಸರು ಆದಿನಾಥ ನೇಮಿನಾಥ ಉಪಾಧ್ಯೆ. ಬೆಳಗಾಂವಿ ಜಿಲ್ಲೆಯ ಸದಲಗಿ ಗ್ರಾಮದಲ್ಲಿ 1906 ಫೆಬ್ರವರಿ 6ರಂದು ಜನಿಸಿದ ಇವರು ಬೆಳಗಾಂವಿಯಲ್ಲಿ ಆರಂಭದ ವ್ಯಾಸಂಗವನ್ನು ಮುಗಿಸಿದರು. ಸಂಸ್ಕೃತ ಪ್ರಾಕೃತ ಅರ್ಧಮಾಗಧೀ ಭಾಷೆ ಮತ್ತು ಸಾಹಿತ್ಯವನ್ನು ವ್ಯಾಸಂಗದ ವಿಷಯವನ್ನಾಗಿ ಆರಿಸಿಕೊಂಡು ಕೊಲ್ಲಾಪುರದ ರಾಜಾರಾಮ್ ಕಾಲೇಜು ಮತ್ತು ಸಾಂಗಲಿಯ ವಿಲಿಂಗ್ಡನ್ ಕಾಲೇಜುಗಳಲ್ಲಿ ವ್ಯಾಸಂಗಮಾಡಿ ಬಿ.ಎ. ಪದವಿ ಪಡೆದರು (1928). ಅನಂತರ ಪುಣೆಯ ಭಂಡಾರ್ಕರ್ ಸಂಸ್ಥೆಯಲ್ಲಿ ಕಲಿತು ಉನ್ನತ ಶ್ರೇಣಿಯಲ್ಲಿ ಎಂ.ಎ. ಪದವಿ ಪಡೆದರು. ಈ ಅವಧಿಯಲ್ಲಿ ವಿ.ಎಸ್. ಸುಕ್ತಂಕರ್, ಪಿ.ಎಲ್.ವೈದ್ಯ, ಎಸ್.ಕೆ. ಬೆಳವಲಕರ್ ಮೊದಲಾದ ಹೆಸರಾಂತ ವಿದ್ವಾಂಸರ ಉಪನ್ಯಾಸಗಳನ್ನು ಕೇಳಿ ಅವರಿಂದ ಪ್ರಭಾವಿತರಾದರು. ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಅರ್ಧಮಾಗಧೀ ಪ್ರಾಕೃತ ವಿಭಾಗದ ಅಧ್ಯಾಪಕರಾಗಿ ನೇಮಕಗೊಂಡು (1930) ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಉಪಾಧ್ಯೆ ಅವರು ಮುಂದೆ ಮೂರೇ ವರ್ಷಕ್ಕೆ ಪ್ರಾಧ್ಯಾಪಕರಾದರು. 1939ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಡಿ.ಲಿಟ್. ಪದವಿಯನ್ನು ಪಡೆದರು. ಅದೇ ವಿಶ್ವವಿದ್ಯಾ ನಿಲಯದ ಸ್ಟ್ರಿಂಜರ್ ಸಂಶೋಧನ ಶಿಷ್ಯವೃತ್ತಿಯನ್ನು ಪಡೆದರು (1941-43). ರಾಜಾರಾಮ್ ಕಾಲೇಜಿನಲ್ಲಿ ಸುಮಾರು 33 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. ನಿವೃತ್ತಿಯ ಅನಂತರ ಅದೇ ಕಾಲೇಜಿನಲ್ಲಿ ಯು.ಜಿ.ಸಿ. ಸಂಶೋಧನಾ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದರು. ಅನಂತರ ಇವರು ಮೈಸೂರು ವಿಶ್ವವಿದ್ಯಾನಿಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಸಂಸ್ಥಾಪಕ ಪ್ರಾಧ್ಯಾಪಕರಾಗಿಯೂ ಮತ್ತು ಆ ವಿಭಾಗದ ಮುಖ್ಯಸ್ಥರೂ ಆಗಿದ್ದರು (1971-75). ಬೋಧನೆ, ಸಂಶೋಧನೆ ಮತ್ತು ಪ್ರಕಟಣೆ- ಇವು ಉಪಾಧ್ಯೆ ಅವರ ಕಾರ್ಯಕ್ಷೇತ್ರ. ಈ ಕ್ಷೇತ್ರದಲ್ಲಿ ಇವರು ಶ್ರದ್ಧಾಪೂರ್ವಕವಾದ ದುಡಿಮೆಯನ್ನು ಮಾಡಿದ್ದಾರೆ. ತಮ್ಮ 23ನೆಯ ವಯಸ್ಸಿನಲ್ಲಿಯೇ ಬರೆವಣಿಗೆಯನ್ನು ಆರಂಭಿಸಿದ ಇವರು ಸು.150 ವಿದ್ವತ್ಪೂರ್ಣವಾದ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಗ್ರಂಥಸಂಪಾದನಾ ಕಾರ್ಯವನ್ನು ಒಂದು ಕಾಯಕ ಎಂದು ನಂಬಿ ಬಂದಿದ್ದ ಉಪಾಧ್ಯೆ ಸುಮಾರು ಇಪ್ಪತ್ತೈದಕ್ಕೂ ಮೀರಿದ ಸಂಸ್ಕೃತ, ಪ್ರಾಕೃತ, ಅಪಭ್ರಂಶ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಪ್ರತಿಯೊಂದು ಸಂಪಾದಿತ ಗ್ರಂಥಕ್ಕೂ ಪಾಂಡಿತ್ಯಪೂರ್ಣವಾದ ದೀರ್ಘಪೀಠಿಕೆ ಬರೆಯುವುದು ಇವರ ವೈಶಿಷ್ಟ್ಯ. ಇವರು ಸಂಪಾದಿಸಿರುವ ಕೆಲವು ಮುಖ್ಯ ಗ್ರಂಥಗಳಿವು -ಪ್ರವಚನಸಾರ (1935), ಪರಮಾತ್ಮ ಪ್ರಕಾಶ (1936), ವರಾಂಗ ಚರಿತೆ (1936), ಕಂಸವಹೋ (1940), ಬೃಹತ್ ಕಥಾಕೋಶ (1943), ತಿಲೋಯಪಣ್ಣತ್ತಿ (1951), ಕುವಲಯಮಾಲಾ (1959-70), ಕಾರ್ತಿಕೇಯಾನುಪ್ರೇಕ್ಷಾ (1960), ಸಪ್ತಶತೀಸಾರ (1970), ಧರ್ಮ ರತ್ನಾಕರ (1974). 

ಕನ್ನಡದಲ್ಲೂ ಉಪಾಧ್ಯೆ ಅವರು ದೇಶಿಕೋಶಗಳಲ್ಲಿನ ಕನ್ನಡ ಪದಗಳು, ಕವಿಪರಮೇಶ್ವರ ಅಥವಾ ಪರಮೇಷ್ಠಿ ಮುಂತಾದ ಸಂಶೋಧನಾ ಲೇಖನ ಗಳನ್ನು ಬರೆದಿದ್ದಾರೆ. ಇವರ ಪಾಲಿ ಮತ್ತು ಪ್ರಾಕೃತ ಎಂಬ ಗ್ರಂಥ ಕನ್ನಡಕ್ಕಿ ರುವ ಪ್ರಾಕೃತದ ಗಾಢ ಹಿನ್ನೆಲೆಯನ್ನು ವಿವರಿಸುತ್ತದೆ. ವಡ್ಡಾರಾಧನೆಯ ಮೇಲಿನ ಇವರ ಸಂಶೋಧನೆ ಬಹು ಬೆಲೆಯುಳ್ಳದ್ದು. 
ಉಪಾಧ್ಯೆ ಅವರು ಹಲವು ವಿದ್ವತ್ ಸಮ್ಮೇಳನಗಳಿಗೆ ಅಧ್ಯಕ್ಷರಾಗಿ ದ್ದರು. ಅಖಿಲ ಭಾರತ ಪ್ರಾಚ್ಯ ಸಮ್ಮೇಳನ 1940ರಲ್ಲಿ ಹೈದರಾಬಾದಿನಲ್ಲಿ ನೆರೆದಿದ್ದಾಗ, ಅದರ ಪ್ರಾಕೃತ, ಬೌದ್ಧ, ಜೈನ ವಿಭಾಗಗಳ ಅಧ್ಯಕ್ಷರಾಗಿ ಇವರು ಆಯ್ಕೆಯಾಗಿದ್ದರು. ಅನಂತರ ಅಲಿಗಡದಲ್ಲಿ 1966ರಲ್ಲಿ ನಡೆದ ಪ್ರಾಚ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. ಶ್ರವಣಬೆಳಗೊಳದಲ್ಲಿ 1967ರಲ್ಲಿ ನಡೆದ 46ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಆರಿಸಿ ಕನ್ನಡಿಗರು ಗೌರವಿಸಿದ್ದಾರೆ.

ರಾಷ್ಟ್ರದ ಹಲವು ಪ್ರಮುಖ ಸಂಘ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಉಪಾಧ್ಯೆ ಅವರಿಗೆ ನಿಕಟವಾದ ಸಂಪರ್ಕವಿತ್ತು. ಸೊಲ್ಲಾಪುರದ ಜೀವರಾಜ ಜೈನಗ್ರಂಥಮಾಲೆ, ವಾರಾಣಸೀ ಜ್ಞಾನಪೀಠ ಮೂರ್ತಿದೇವಿ ಜೈನ ಗ್ರಂಥಮಾಲೆ ಮುಂತಾದ ಹಲವು ಗ್ರಂಥಮಾಲೆಗಳ ಪ್ರಧಾನ ಸಂಪಾದಕರಾಗಿದ್ದರು. ಭಾರತೀಯ ಜ್ಞಾನಪೀಠದೊಂದಿಗೆ ನಿಕಟ ಸಂಪರ್ಕ ಪಡೆದಿದ್ದ ಇವರು ಪೀಠದ ಕನ್ನಡ ಕಾವ್ಯಮಾಲೆಯ ಉದಯಕ್ಕೆ ಕಾರಣರಾಗಿ ದ್ದರು. ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ 9 ವರ್ಷ ಕಲಾವಿಭಾಗದ ಡೀನರಾಗಿದ್ದ ಇವರು ಪುಣೆ, ಗಯಾ, ಮುಂಬಯಿ, ನಾಗಪುರ, ಬೆಂಗಳೂರು ಮುಂತಾದ ಹಲವು ವಿಶ್ವವಿದ್ಯಾಲಯಗಳ ವಿವಿಧ ಮಂಡಳಿಗಳ ಸದಸ್ಯರಾಗಿದ್ದರು. ಪುಣೆಯ ಸಂಸ್ಕೃತ ಕೋಶ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದಕೀಯ ಮಂಡಲಿಗಳಲ್ಲಿದ್ದರು. 
ಭಾರತ ಸರ್ಕಾರದ ಪ್ರತಿನಿಧಿಗಳಾಗಿ ಕ್ಯಾನ್ಬರದಲ್ಲಿ (1971) ಮತ್ತು ಪ್ಯಾರಿಸ್ನಲ್ಲಿ (1973) ನಡೆದ ಅಂತಾರಾಷ್ಟ್ರೀಯ ಪ್ರಾಚ್ಯಪರಿಷತ್ತಿನಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ಬೆಲ್ಜಿಯಂನಲ್ಲಿ 1974ರಲ್ಲಿ ನಡೆದ ಎರಡನೆಯ ಜಾಗತಿಕ ಧರ್ಮ ಮತ್ತು ಶಾಂತಿ ಸಮ್ಮೇಳನದಲ್ಲೂ ಭಾಗವಹಿಸಿದ್ದರು.

ಭಾರತ ಸರ್ಕಾರ 1975ರ ಸ್ವಾತಂತ್ರ್ಯ ದಿನದಂದು ಉಪಾಧ್ಯೆ ಅವರಿಗೆ ಸಂಸ್ಕೃತ ವಿದ್ವಾಂಸ ಪ್ರಶಸ್ತಿಪತ್ರ ಕೊಟ್ಟು ಗೌರವಿಸಿತು. ಇದೇ ವರ್ಷ ಇವರ ಸಿದ್ಧಸೇನ ದಿವಾಕರನ ನ್ಯಾಯಾವತಾರ ಎಂಬ ಗ್ರಂಥಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಬಹುಮಾನ ಲಭಿಸಿತು. ಅವರು 1975 ಅಕ್ಟೋಬರ್ 8ರಂದು ನಿಧನರಾದರು. (ಎಂ.ಎ.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ